HANUMANTHANAGAR CO-OP. BANK


(09:30 AM to 05:30 PM)

ಹನುಮಂತನಗರ ಸಹಕಾರಿ ಬ್ಯಾಂಕ್ ನಿ.

THE HANUMANTHANAGAR CO-OP. BANK LTD

Hanumanthanagar, Bangalore-560019
Profile

Shri H.S. Doreswamy

ಹನುಮಂತನಗರ ಸಹಕಾರಿ ಬ್ಯಾಂಕ್ ನಡೆದು ಬಂದ ದಾರಿ

1951-52 ರಲ್ಲಿ ಹನುಮಂತನಗರ ಬಡಾವಣೆ ನಿರ್ಮಿಸಿದ ಆಗಿನ ಮೈಸೂರು ಸರ್ಕಾರ ಕೆಳದರ್ಜೆ ನೌಕರರಿಗೆಂದೇ ಕೇವಲ 25 x 45 ಅಳತೆಯ ನಿವೇಶನವನ್ನು ಮಾಡಿ ಪ್ರತಿ ನಿವೇಶನವನ್ನು ರೂ.500-00 ಗಳಿಗೆ ಹಂಚಿತು. ಆಗ ಈ ಬೆಲೆ ದುಬಾರಿ ಎನಿಸಿದ್ದು ಬಹಳ ನಿವೇಶನಗಳು ಖಾಲಿ ಇದ್ದು ಅವುಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು. ಆದರೂ ಈ ಬಡಾವಣೆ ಅಭಿವೃದ್ಧಿಯಾಗಲು ಬಹಳ ದಿನಗಳೆ ಬೇಕಾಯಿತು. ಬೆಂಗಳೂರಿನ ಆಗ್ನೇಯ ದಿಕ್ಕಿಗೆ ಅಂದು ಇದೇ ಕಡೆಯ ಬಡಾವಣೆಯಾಗಿತ್ತು. ನಂತರ ರೆವಿನ್ಯೂ ನಿವೇಶನಗಳು ತಲೆ ಎತ್ತಿ ಹನುಮಂತನಗರ ಬಡಾವಣೆ ಬೆಳೆಯಲಾರಂಭಿಸಿತು. ಆಗ ಕೆಳದರ್ಜೆಯ ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿರುವ ಹನುಮಂತನಗರ ಬಡಾವಣೆಯ ನಿವಾಸಿಗಳು ಎದುರಿಸುತ್ತಿದ್ದ ಆರ್ಥಿಕ ಮುಗ್ಗಟ್ಟನ್ನು ಗಮನದಲ್ಲಿಟ್ಟುಕೊಂಡು ಒಂದು ಸಹಕಾರಿ ಬ್ಯಾಂಕನ್ನು ಸ್ಥಾಪಿಸಬೇಕೆಂಬ ಯೋಚನೆ ಬಂದು ಈ ಬಡಾವಣೆಯ ಪ್ರಮುಖರೆನಿಸಿಕೊಂಡ ಗಾಂಧಿವಾದಿಗಳೂ, ಸರ್ವೋದಯ ನಾಯಕರೂ ಆದ ಶ್ರೀ ಹೆಚ್.ಎಸ್.ದೊರೆಸ್ವಾಮಿಯವರ ಮುಂದಾಳತ್ವದಲ್ಲಿ ಶ್ರೀ ಸಿ.ಸಂಪತ್ಕುಮಾರಾಚಾರ್ಯರು, ಶ್ರೀ ಟಿ.ಶ್ರೀನಿವಾಸರಾಯರು, ಶ್ರೀ ಬಿ.ಎಂ.ಶ್ರೀಕಂಠಯ್ಯನವರು, ಶ್ರೀ ಬಿ.ವಿ.ಅನಂತನಾರಾಯಣಸ್ವಾಮಿಯವರು, ಶ್ರೀ ಪಿ.ವಿ.ವೀರಣ್ಣಗೌಡರು, ಶ್ರೀ ಭವಾನಿ ಪ್ರಸಾದರು, ಶ್ರೀ ಸಿ.ಮಲ್ಲಯ್ಯನವರು, ಮುಂತಾದವರನ್ನು ಕೂಡಿಕೊಂಡು ಹಣ ಸಂಗ್ರಹಣೆ ಕಾರ್ಯ ಪ್ರಾರಂಭಿಸಿದರು. ಒಂದು ಷೇರಿಗೆ ರೂ.50-00 ರಂತೆ ರೂ.11,225-00 ಗಳನ್ನು 207 ಸದಸ್ಯರಿಂದ ಸಂಗ್ರಹಿಸಿ ದಿನಾಂಕ 24-8-1965ನೇ ಗಣೇಶ ಚತುರ್ಥಿಯಂದು ಹನುಮಂತನಗರ 3ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆಯಲ್ಲಿರುವ ಒಂದು ಪುಟ್ಟ ಅಂಗಡಿಯಲ್ಲಿ ಬ್ಯಾಂಕನ್ನು ಪ್ರಾರಂಭಿಸಲಾಯಿತು. ಆಗಿನ ಕಾಲಕ್ಕೆ ಈ ರೂ.10,000/-ವನ್ನು ಸಂಗ್ರಹಿಸುವಲ್ಲಿ ಪಟ್ಟಪಾಡು ದೇವರಿಗೇ ಪ್ರೀತಿ. ಬೆಳಿಗ್ಗೆ 6 ಗಂಟೆಗೆ ಜನ ಕೆಲಸಗಳಿಗೆ ಹೋಗುವ ಮುಂಚೆ ಅಥವಾ ಸಂಜೆ 6 ಗಂಟೆ ನಂತರ ಕೆಲಸದಿಂದ ಹಿಂದಿರುಗುವ ವೇಳೆಯನ್ನು ಅನುಸರಿಸಿ ವೈಯಕ್ತಿಕವಾಗಿ ಒಬ್ಬೊಬ್ಬರನ್ನು ಭೇಟಿ ಮಾಡಿ, ಸಮಜಾಯಿಷಿ ಹೇಳಿ ಹಣ ಸಂಗ್ರಹಿಸಲಾಯಿತು.

ಈ ಬ್ಯಾಂಕ್ ಪ್ರಾರಂಭ ಮಾಡುವುದಕ್ಕೆ ಸಿಬ್ಬಂದಿ ವರ್ಗ ಬೇಕಾಗಿತ್ತು. ನಮ್ಮ ಬ್ಯಾಂಕಿನ ಕಡಿಮೆ ಬಂಡವಾಳ, ಚಿಕ್ಕ ಜಾಗ, ಅದಕ್ಕೆ ತಕ್ಕಂತೆ ಕಡಿಮೆ ಸಂಬಳ ಪಡೆದು ದುಡಿಯಲು ತಯಾರಿರುವ ನುರಿತ ವ್ಯಕ್ತಿಯೊಬ್ಬರನ್ನು ಹುಡುಕಬೇಕಾಗಿತ್ತು. ಆಗ ತಾನೇ ಆಂಧ್ರ ಸರ್ಕಾರದ ಸಹಕಾರಿ ಇಲಾಖೆಯಲ್ಲಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಗಿ ನಿವೃತ್ತಿ ಹೊಂದಿ ಬೆಂಗಳೂರಿಗೆ ಬಂದು ನೆಲೆಸಿದ್ದ ಶ್ರೀ ಎ.ನಾರಾಯಣರಾವ್‍ರವರು ಅದೃಷ್ಟವಶಾತ್ ಕಣ್ಣಿಗೆ ಬಿದ್ದರು. ಹಣ ಸಂಗ್ರಹಿಸಲು ಪಟ್ಟ ಕಷ್ಟ ಸುಖಗಳನ್ನು ಅವರ ಹೆಗಲ ಮೇಲೆ ಹೇರಿ, ಬ್ಯಾಂಕನ್ನು ಕಾರ್ಯರೂಪಕ್ಕೆ ತರಲು ಅವರನ್ನು ಕೇಳಿಕೊಂಡರು. ಅವರು ದೊಡ್ಡ ಮನಸ್ಸು ಮಾಡಿ ಒಪ್ಪಿ, ಜವಾಬ್ದಾರಿಯನ್ನು ವಹಿಸಿಕೊಂಡು ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಮತ್ತು ಸದಸ್ಯರನ್ನೂ ಸರಿದೂಗಿಸಿಕೊಂಡು ಕಾರ್ಯನಿರ್ವಹಿಸುತ್ತಾ ಬಂದು 1986 ರಲ್ಲಿ ಅವರು ಸ್ವ-ಇಚ್ಚೆಯಿಂದ ನಿವೃತ್ತರಾದರು. ಅವರ ಇರುವಿಕೆ ಕಾಲದಲ್ಲಿ ಅವರು ನೀಡಿದ ಮಾರ್ಗದರ್ಶನ, ವಹಿಸಿದ ಶ್ರದ್ಧೆ ಬ್ಯಾಂಕು ಅಭಿವೃದ್ಧಿಗೆ ಬರಲು ಕಾರಣವಾಯಿತೆಂದರೆ ಅದು ಉತ್ಪ್ರೇಕ್ಷೆಯಲ್ಲ. ಬ್ಯಾಂಕಿನ ಪ್ರಥಮ ಅಧ್ಯಕ್ಷರಾಗಿ ಮುಖ್ಯ ಪ್ರವರ್ತಕರಾದ ಶ್ರೀ ಹೆಚ್.ಎಸ್.ದೊರೆಸ್ವಾಮಿಯವರನ್ನು ಆರಿಸಲಾಯಿತು. ಶ್ರೀ ಪಿ ವಿ ವೀರಣ್ಣಗೌಡರನ್ನು ಉಪಾಧ್ಯಕ್ಷರನ್ನಾಗಿಯೂ ಶ್ರೀ ಭವಾನಿಪ್ರಸಾದ್‍ರವರನ್ನು ಕಾರ್ಯದರ್ಶಿಗಳನ್ನಾಗಿಯೂ ಶ್ರೀ ಸಂಪತ್ಕುಮಾರಾಚಾಯ್ಯರನ್ನು ಖಜಾಂಚಿಗಳನ್ನಾಗಿಯೂ ಮತ್ತು ಶ್ರೀ ಟಿ ಶ್ರೀನಿವಾಸರಾಯರು, ಶ್ರೀ ಶ್ರೀಕಂಠಯ್ಯನವರು, ಶ್ರೀ ಸಿ ಮಲ್ಲಯ್ಯನವರು, ಶ್ರೀ ಎಂ ವೆಂಕಟರಾವ್, ಶ್ರೀ. ಬಿ ವಿ ಅನಂತನಾರಾಯಣಸ್ವಾಮಿ, ಶ್ರೀ ಅರೆತಿಮ್ಮೇಗೌಡರು ಇವರುಗಳನ್ನೊಳಗೊಂಡ ಆಡಳಿತ ಮಂಡಳಿಯನ್ನು ದಿನಾಂಕ 08-08-1965 ರಂದು ರಚಿಸಲಾಯಿತು.

ಎಡದಿಂದ ಬಲಕ್ಕೆ (ಕುಳಿತಿರುವವರು): ಶ್ರೀ ಸಿ.ಸಂಪತ್ಕುಮಾರಾಚಾರ್ (ಖಜಾಂಜಿ), ಶ್ರೀ ಎ.ಆರ್.ರಂಗಸ್ವಾಮಿ, ಶ್ರೀ ಬಿ.ಭವಾನಿ ಪ್ರಸಾದ್ (ಗೌ|| ಕಾರ್ಯದರ್ಶಿ), ಶ್ರೀಎಚ್.ಎಸ್. ದೊರೆಸ್ವಾಮಿ (ಅಧ್ಯಕ್ಷರು), ಶ್ರೀ ಪಿ.ವಿ.ವೀರಣ್ಣಗೌಡ (ಉಪಾಧ್ಯಕ್ಷರು), ಶ್ರೀ ಬಿ.ಎನ್.ಶ್ರೀಕಂಠಯ್ಯ, ಶ್ರೀ ಸಿ.ಬಿ.ವೆಂಕಟರಾವ್, ಶ್ರೀ ಎ.ಎಸ್.ನಾಗಭೂಷಣ ರಾವ್, ಶ್ರೀ ಸಿ.ಮಲ್ಲಯ್ಯ.
ಬ್ಯಾಂಕಿನ ಪರಿಸ್ಥಿತಿ ಒಮ್ಮೆಗೆ ಸುಧಾರಿಸಲಿಲ್ಲ. ಖರ್ಚನ್ನು ಕಡಿಮೆ ಮಾಡುವ ಉದ್ದೇಶದಿಂದ ವಿಶೇಷ ಖರ್ಚುಗಳನ್ನು ಆಡಳಿತ ಮಂಡಳಿಯ ಸದಸ್ಯರೇ ನಿಭಾಯಿಸುತ್ತಿದ್ದರು. ಆಡಳಿತ ಮಂಡಳಿಯ ಸಭೆ ಸಾಲ ನೀಡಿಕೆ ಸಮಿತಿಯ ಸಭೆಗಳನ್ನು ಬಹಳ ಕಾಲ ಶ್ರೀ ಹೆಚ್.ಎಸ್.ದೊರೆಸ್ವಾಮಿಯವರ, ಶ್ರೀ ಸಿ.ಸಂಪತ್ಕುಮಾರಾಚಾರ್ಯರವರ ಶ್ರೀ ಟಿ.ಶ್ರೀನಿವಾಸರಾಯರವರ ಮನೆಗಳಲ್ಲಿ ನಡೆಸುತ್ತಿದ್ದು, ಅಂದಿನ ಉಪಹಾರದ ಖರ್ಚು ಆಯಾ ಮನೆಗಳವರದೇ ಆಗಿತ್ತು. ನಮ್ಮಲ್ಲಿ ಠೇವಣಿ ಸಂಗ್ರಹಣೆ ಕಾರ್ಯ ಬಹಳ ಕುಂಠಿತವಾಗಿದ್ದು, ಸದಸ್ಯರಿಗೆ ಸಾಲ ನೀಡಲು ಹಣದ ಕೊರತೆಯಿತ್ತು. ಬೆಂಗಳೂರು ಜಿಲ್ಲಾ ಸಹಕಾರಿ ಬ್ಯಾಂಕಿನಿಂದ ಶೇ. 18ರ ದರದಲ್ಲಿ ಕ್ಯಾಷ್ ಕ್ರೆಡಿಟ್ ತಂದು ನಾವು ಶೇ.21 ರ ಬಡ್ಡಿದರದಲ್ಲಿ ಸದಸ್ಯರಿಗೆ ಸಾಲ ನೀಡುತ್ತಿದ್ದೆವು. ಈ ಪರಿಸ್ಥಿತಿ ಸುಮಾರು 1983ರವರೆಗೆ ಮುಂದುವರೆಯಿತು.
1968 ರಲ್ಲಿ ಶ್ರೀ ಸಿ.ಸಂಪತ್ಕುಮಾರಾಚಾರ್ಯರ ಮನೆಯ ಮುಂದಿನ ಒಂದು ಮಳಿಗೆಯನ್ನು ಬಹಳ ಕಡಿಮೆ ಬಾಡಿಗೆಗೆ ಪಡೆದು ಈ ಬ್ಯಾಂಕನ್ನು ಅಲ್ಲಿಗೆ ಬದಲಾಯಿಸಿದರು. ಈ ಮಳಿಗೆ ಮೊದಲಿದ್ದ ಅಂಗಡಿಗಿಂತ ಎರಡರಷ್ಟು ದೊಡ್ಡದಾಗಿತ್ತು.
1971 ರಲ್ಲಿ ಶ್ರೀ ಹೆಚ್.ಎಸ್.ದೊರೆಸ್ವಾಮಿಯವರು ಅಧ್ಯಕ್ಷರಾಗಿದ್ದಾಗ ಅವರು ಮತ್ತು ಆಡಳಿತ ಮಂಡಳಿ ಸದಸ್ಯರ ಮುಂದಾಲೋಚನೆ ಮತ್ತು ಪರಿಶ್ರಮದಿಂದ 60 ಘಿ 40 ಅಳತೆಯ ನಿವೇಶನವನ್ನು ರೂ.28,000/- ಬಂಡವಾಳದಿಂದ ಕೊಳ್ಳಲಾಯಿತು. ನಮ್ಮಲ್ಲಿ ಕಡಿಮೆ ಬಂಡವಾಳವಿದ್ದು ಹೊರಗಡೆಯಿಂದ ತರುತ್ತಿದ್ದ ಹಣಕ್ಕೆ ಹೆಚ್ಚಿನ ಬಡ್ಡಿ ತೆರಬೇಕಾಗಿದ್ದುದರಿಂದ ನಾವು ಗಳಿಸಿದ ಲಾಭ ಸ್ವಲ್ಪವೇ ಇತ್ತು. ಸದಸ್ಯರಿಗೆ ಹೆಚ್ಚಿನ ಡಿವಿಡೆಂಡ್ ಹಂಚಲು ಅದು ಸಾಧ್ಯವಾಗುತ್ತಿರಲಿಲ್ಲ. ಮೊದಲ ಒಂದೆರಡು ವರ್ಷಗಳಲ್ಲಿ ಬ್ಯಾಂಕು ನಷ್ಟವನ್ನೇ ಅನುಭವಿಸಿತು. ಅನಂತರ ಶ್ರೀ ಪಿ.ವಿ.ವೀರಣ್ಣಗೌಡರು ಅಧ್ಯಕ್ಷರಾಗಿದ್ದಾಗ ಕೆಲವು ಸ್ವಹಿತಾಸಕ್ತ ಸದಸ್ಯರು ಪ್ರತಿ ಸರ್ವ ಸದಸ್ಯರ ಸಭೆಗಳಲ್ಲಿ ಈ ಪೂರಾ ನಿವೇಶನವನ್ನೂ ಮಾರುವಂತೆ ಒತ್ತಾಯ ತರುತ್ತಿದ್ದರು. ಆಗ ಅವರಿಗೆ ಸಮಜಾಯಿಷಿ ಹೇಳಿ ಶ್ರೀ ಪಿ.ವಿ.ವೀರಣ್ಣಗೌಡರು ದಕ್ಷಿಣಪಾಶ್ರ್ವದ ಅರ್ಧ ನಿವೇಶನವನ್ನು (30ಘಿ40 ಅಳತೆಯ) ಮಾತ್ರ ಮಾರಾಟ ಮಾಡಲು ಟೆಂಡರ್ ಕರೆದಾಗ ಶ್ರೀಮತಿ ಸರೋಜಮ್ಮ ಸತ್ಯನಾರಾಯಣರಾಯರು ರೂ.28,800-00 ಗಳನ್ನು ಕೊಡಲು ಒಪ್ಪಿದರು. ನಾವು ಪೂರ್ತಿ ನಿವೇಶನಕ್ಕೆ ನೀಡಿದ್ದ ಹಣ, ಅರ್ಧ ನಿವೇಶನ ಮಾರಿದ್ದರಿಂದಲೇ ಮರುಪಾವತಿಯಾಯಿತು. ಹೀಗಾಗಿ ನಮಗೆ ಉಳಿದಿರುವ 30 ಘಿ 40 ಅಡಿ ಅಳತೆಯ ನಿವೇಶನ ಬ್ಯಾಂಕಿಗೆ ಮುಫ್ಫತ್ತಾಗಿ ಬಂದಂತಾಯಿತು.

ಅನಂತರ ಬಂದ ಅಧ್ಯಕ್ಷರುಗಳಾದ ಶ್ರೀ ಸಿದ್ದಯ್ಯನವರು, ಶ್ರೀ ಎ.ಮರಿಯಪ್ಪನವರು, ಶ್ರೀ ಈರೇಗೌಡರು ಮತ್ತು ಶ್ರೀ ಪಿ.ವಿ.ವೀರಣ್ಣಗೌಡರು ಮತ್ತು ಇತರ ಸದಸ್ಯರು ಬ್ಯಾಂಕಿನ ಹಣಕಾಸಿನ ಸ್ಥಿತಿ ಉತ್ತಮ ಪಡಿಸುವ ದೃಷ್ಟಿಯಿಂದ ಸ್ವಂತ ಕಟ್ಟಡ ನಿರ್ಮಿಸುವುದು ಅಗತ್ಯವೆಂದು ಮನಗಂಡು ಪ್ರಯತ್ನಿಸಿದರೂ ಒಂದಲ್ಲಾ ಒಂದು ಕಾರಣದಿಂದ ಅಡೆತಡೆಗಳು ಉಂಟಾಗಿ ಸ್ವಂತ ಕಟ್ಟಡ ನಿರ್ಮಿಸಲು ಸಾಧ್ಯವಾಗಲಿಲ್ಲ.
ನಂತರ 1981 ರಿಂದ 1983 ರವರೆಗೆ ಚುನಾವಣೆಯನ್ನು ಸರ್ಕಾರ ಮುಂದೂಡಿತಾಗಿ ಒಂದು ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬರಲಾಗಲಿಲ್ಲ. ಅಷ್ಟು ಹೊತ್ತಿಗೆ ಸಂಸ್ಥಾಪಕ ಹಿರಿಯ ಸದಸ್ಯರೆಲ್ಲರೂ ಆಡಳಿತ ಮಂಡಳಿಯ ಸದಸ್ಯತ್ವದಿಂದ ನಿರ್ಗಮಿಸಿದ್ದರು. 1980ರಲ್ಲಿ ಶ್ರೀ ಪಿ.ವಿ.ವೀರಣ್ಣಗೌಡರು ಸಹ ಅನಾರೋಗ್ಯದ ನಿಮಿತ್ತ ಮಂಡಳಿಯಿಂದ ನಿರ್ಗಮಿಸಿದ್ದರು.

1983ರಲ್ಲಿ ಸರ್ಕಾರ ಸಹಕಾರ ಸಂಘಗಳ ಚುನಾವಣೆ ನಡೆಯಬೇಕೆಂದು ಆದೇಶ ನೀಡಿದಾಗ, ಬ್ಯಾಂಕಿನ ಆರ್ಥಿಕ ದುಸ್ಥಿತಿಯನ್ನು ನೋಡಿ ಆಡಳಿತ ಮಂಡಳಿ ಸದಸ್ಯತ್ವಕ್ಕೆ ನಾಮಪತ್ರ ಸಲ್ಲಿಸಲು ಸದಸ್ಯರು ಮುಂದೆ ಬರದೆ ಹೋದರು. ಆಗ ಬ್ಯಾಂಕಿನ ದುಡಿಯುವ ಬಂಡವಾಳ ಕೇವಲ ರೂ.4,00,000/- ಇತ್ತು. 13 ಜನ ಸದಸ್ಯರು ನಾಮಪತ್ರ ಸಲ್ಲಿಸಿದರಾದರೂ, ಅದರಲ್ಲಿ 6 ಜನ ಸದಸ್ಯರು ತಮ್ಮ ನಾಮಪತ್ರಗಳನ್ನು ವಾಪಸ್ಸು ಪಡೆದು 7 ಜನ ಮಾತ್ರ ಚುನಾವಣೆಯ ಕಣದಲ್ಲಿ ಉಳಿದುಕೊಂಡರು. ಹಿಂದಿನ ವರ್ಷಗಳಲ್ಲಿ ಅಧಿಕಾರದಲ್ಲಿದ್ದ ನಿರ್ದೇಶಕರಾರೂ ಸ್ಪರ್ಧಿಸಲಿಲ್ಲ. ಉಳಿದ 7 ಜನ ಸದಸ್ಯರಲ್ಲಿ ಶ್ರೀ ಬಿ.ಎಸ್. ಪ್ರಭಾಕರ, ಶ್ರೀ ಎನ್.ಆರ್.ಕುಪ್ಪೂರಾವ್, ಶ್ರೀ ಹೆಚ್.ಎ.ಗುರುರಾಜ್, ಶ್ರೀ ಎಂ.ಜನಾರ್ಧನ್, ಶ್ರೀ ಜಿ.ಶ್ರೀನಿವಾಸನ್ ಅವರು ಸಾಂಧರ್ಬಿಕವಾಗಿ ನಾಮಪತ್ರ ಸಲ್ಲಿಸಿದ್ದರು. ಇವರೆಲ್ಲರೂ ಸಹಕಾರಿ ಕ್ಷೇತ್ರದ 1983-84ರ ಆಡಳಿತ ಮಂಡಳಿಗೆ ಹೊಸಬರು. ಆಗ ಶ್ರೀ ಎ.ಮರಿಯಪ್ಪನವರು (ಅವರು ಹಿಂದೆ ಬ್ಯಾಂಕಿನ ಅಧ್ಯಕ್ಷರಾಗಿದ್ದರು) ಶ್ರೀ ಪಿ.ವಿ.ವೀರಣ್ಣಗೌಡರನ್ನು ಸಂಧಿಸಿ ನಾವು ಹಿಂದೆ ಏನು ಗುರಿ ಇಟ್ಟುಕೊಂಡಿದ್ದೆವೊ ಅದನ್ನು ಸಾಧಿಸಲು ಎಲ್ಲಾ ವಿಧದಲ್ಲೂ ಶ್ರಮಿಸಿ ಕಾರ್ಯಗತ ಮಾಡಲು ಪ್ರಯತ್ನಿಸೋಣ ಎಂಬ ಅನಿಸಿಕೆಯನ್ನು ಮುಂದಿಟ್ಟಾಗ ಶ್ರೀ ಪಿ.ವಿ.ವೀರಣ್ಣಗೌಡರು ಕಾರ್ಯಕಾರಿ ಸಮಿತಿ ಸೇರಲು ತಮ್ಮ ನಾಮಪತ್ರ ಸಲ್ಲಿಸಿದರು. ಇನ್ನೂ ಕೆಲವು ಹಿರಿಯ ಸದಸ್ಯರನ್ನು ತಮ್ಮ ಜೊತೆಗೂಡಲು ಕೇಳಿಕೊಂಡರು. ಆದರೆ ಆಗಿನ ಬ್ಯಾಂಕಿನ ಪರಿಸ್ಥಿತಿಯನ್ನು ಅರಿತವರಾರೂ ಮುಂದೆ ಬರಲಿಲ್ಲ. ಆಗ ನಾವು ಕೇವಲ 7 ಜನ ಸದಸ್ಯರಿರುವ ಆಡಳಿತ ಮಂಡಳಿಯನ್ನು ರಚಿಸಲು ಸಹಕಾರ ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಅನುಮಾನ ಬಂದು ತಜ್ಞರಲ್ಲಿ ವಿಚಾರಿಸಿದಾಗ ಸಹಕಾರಿ ಕಾಯ್ದೆ ಪ್ರಕಾರ ಹಾಗೆ ರಚಿಸಲು ಅವಕಾಶವಿದೆ ಎಂದು ತಿಳಿದು ಬಂತು. ಈ ವಿಷಯನ್ನು ದಿನಾಂಕ 11-09-1983 ರಲ್ಲಿ ನಡೆದ ಸರ್ವಸದಸ್ಯರ ಸಭೆಗೆ ತಿಳಿಸಲಾಯಿತು. ಸಭೆಯು ಸರ್ವಾನುಮತದಿಂದ ಅಂಗೀಕಾರ ನೀಡಿತು. ಅದೇ ಸಂದರ್ಭದಲ್ಲಿ ಕೆಲವು ಸದಸ್ಯರು ನಮಗೆ ಬೆಂಬಲ ಕೊಟ್ಟರಲ್ಲದೆ, ನಾವು ಸಾಧಿಸಬೇಕೆಂದಿದ್ದ ಕಟ್ಟಡ ಕೆಲಸವನ್ನೂ ಕಾರ್ಯಗತ ಮಾಡಲು ಎರಡು ವರ್ಷದ ಅಂದರೆ 1981-82 ಮತ್ತು 1982-83 ನೇ ಸಾಲಿನ ಲಾಭಾಂಶವನ್ನು ಕಟ್ಟಡದ ನಿಧಿಗೆ ಒಪ್ಪಿಸಲು ಅನುಮೋದಿಸಿ ಆ ಸಂಬಂಧದಲ್ಲಿ ಮಂಡಿಸಲಾದ ನಿರ್ಣಯವನ್ನು ಅಂಗೀಕರಿಸಿತು. ಹಾಗೆಯೇ ಪುನ: 1984-85 ರ ಲಾಭಾಂಶವನ್ನೂ ಕೂಡ ಬಿಟ್ಟುಕೊಟ್ಟು ಬ್ಯಾಂಕ್ ತನ್ನ ಸ್ವಂತ ಕಟ್ಟಡ ಹೊಂದಲು ಸದಸ್ಯರು ನೆರವಾದರು.

ನೂತನ ಆಡಳಿತ ಮಂಡಳಿ ಈ ಕೆಳಕಂಡಂತೆ ರಚಿಸಲಾಯಿಗಿತ್ತು.
1. ಶ್ರೀ ವಿ.ಪಿ. ವೀರಣ್ಣಗೌಡ - ಅಧ್ಯಕ್ಷರು
2. ಶ್ರೀ ಜಿ ಶ್ರೀನಿವಾಸನ್ - ಉಪಾಧ್ಯಕ್ಷರು
3. ಶ್ರೀ ಎ ಮರಿಯಪ್ಪ - ಕಾರ್ಯದರ್ಶಿ
4. ಶ್ರೀ ಹೆಚ್.ಎ. ಗುರುರಾಜ - ಖಜಾಂಚಿ
5. ಶ್ರೀ ಎಂ ಜನಾರ್ಧನ್ - ಸದಸ್ಯರು
6. ಶ್ರೀ ಎನ್.ಆರ್. ಕುಪ್ಪೂರಾವ್ - ಸದಸ್ಯರು
7. ಶ್ರೀ ಬಿ.ಎಸ್. ಪ್ರಭಾಕರ - ಸದಸ್ಯರು


1983ರಲ್ಲಿ ಇದ್ದ ಹಣಕಾಸಿನ ಪರಿಸ್ಥಿತಿ ಈ ಕೆಳಕಂಡಂತೆ ಇತ್ತು.
ಸದಸ್ಯರ ಸಂಖ್ಯೆ : 1493
ಷೇರು ಬಂಡವಾಳ : ರೂ.2,31,055-00
ಠೇವಣಿಗಳು : ರೂ.1,95,092-00
ಸಾಲ ವಿತರಣೆ : ರೂ.4,90,000-00
ಲಾಭಾಂಶ : ರೂ.40,000-00


ಈ ಮೇಲಿನ 7 ಸದಸ್ಯರು ಒಮ್ಮತದಿಂದ ಪ್ರಾರಂಭದಿಂದಲೇ ಶ್ರದ್ಧೆಯಿಂದ ಕಾರ್ಯನಿರ್ವಹಿಸಿ ಎಲ್ಲಾ ವಿಧದಲ್ಲೂ ಶ್ರಮಿಸಿ, ಸಹಕರಿಸಿ ಈ ಬ್ಯಾಂಕ್ ಪ್ರಗತಿಯತ್ತ ನಡೆಯಲು ಕಾರಣರಾದರು. ನಂತರ ಹಿಂದೆ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿದ್ದ ಶ್ರೀ ಹೆಚ್.ಎಸ್.ದೊರೆಸ್ವಾಮಿ, ಶ್ರೀ ಸಂಪತ್ಕುಮಾರಾಚಾರ್ಯ, ಶ್ರೀ ಬಿ.ವಿ.ಅನಂತನಾರಾಯಣಸ್ವಾಮಿ, ಶ್ರೀ ಶಿವರಾಮು ಇವರುಗಳ ಜೊತೆಗೆ ಡಾ: ಎಸ್.ಜವರೇಗೌಡರು, ಶ್ರೀ ಬೆಟ್ಟಸ್ವಾಮಿಗೌಡರನ್ನು ಆಡಳಿತ ಮಂಡಳಿಗೆ ಹಂತ ಹಂತವಾಗಿ ನಾಮಕರಣ ಮಾಡಿಕೊಳ್ಳಲಾಯಿತು. ಈ ಆಡಳಿತ ಮಂಡಳಿಯು, ಸದಸ್ಯರೆಲ್ಲರಿಗೂ ಸಾಧಿಸಬೇಕಾದ ಉದ್ದೇಶವನ್ನು ವಿವರವಾಗಿ ತಿಳಿಸಿದಾಗ ಅವರೆಲ್ಲರೂ ಒಮ್ಮತದಿಂದ ಒಪ್ಪಿ ಎಲ್ಲಾ ವಿಧದಲ್ಲೂ ಸಹಕಾರ ನೀಡುವುದಾಗಿಯೂ ಮತ್ತು ಸಹಭಾಗಿಗಳಾಗುವುದಾಗಿಯೂ ಆಶ್ವಾಸನೆ ನೀಡಿದರು. ಅಂದಿನಿಂದಲೇ ನಮ್ಮ ಕಾರ್ಯ ಚಟುವಟಿಕೆ ತೀವ್ರಗತಿಯಿಂದ ಪ್ರಾರಂಭವಾಯಿತು. ಕಟ್ಟಡ ಕಟ್ಟಲು ಬೇಕಾದ ಪೂರ್ವ ಸಿದ್ಧತೆ ವ್ಯವಸ್ಥಿತವಾಗಿ ನಡೆದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೂ ಈ ವಿಚಾರವನ್ನು ತಿಳಿಯಪಡಿಸಲಾಯಿತು.

ಹನುಮಂತನಗರದಲ್ಲಿ (ಈಗಿನ ಕೇಂದ್ರ ಕಛೇರಿ) ಎರಡು ಮಾಳಿಗೆ ಕಟ್ಟಡ (ನೆಲಮಾಳಿಗೆ ಮತ್ತು ನೆಲ ಮಹಡಿ) ನಿರ್ಮಾಣ ದಿನಾಂಕ 16-03-1985 ಕ್ಕೆ ಮುಗಿಸಿ ದಿನಾಂಕ 03.08.1986 ರಂದು ಶ್ರೀ ವಿ.ಎಸ್.ಕೃಷ್ಣಯ್ಯರ್, ಲೋಕಸಭಾ ಸದಸ್ಯರು, ಶ್ರೀ ಟಿ.ಆರ್.ಶಾಮಣ್ಣನವರು ಎಂ.ಎಲ್.ಸಿ. ಇವರ ಸಮ್ಮುಖದಲ್ಲಿ ನೂತನ ಕಟ್ಟಡದ ಪ್ರಾರಂಭೋತ್ಸವವನ್ನೂ ನೆರವೇರಿಸಲಾಯಿತು.


ನಂತರ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡರು.
1. ದಿನಾಂಕ : 19-11-1983 ರಲ್ಲಿ ಅಂಜನಾದ್ರಿ ಸರ್ಟಿಫಿಕೇಟ್ ಮತ್ತು ರಿಕರಿಂಗ್ ಡಿಪಾಸಿಟ್ ಎಂಬ ಎರಡು ಹೊಸ ಠೇವಣಿಗಳನ್ನು ಪ್ರಾರಂಭಿಸಿಲಾಯಿತು.
2. ದಿನಾಂಕ : 30-01-1988 ರಲ್ಲಿ ಮಾರುತಿ ಕ್ಯಾಷ್ ಸರ್ಟಿಫಿಕೇಟ್‍ನ್ನು ಪ್ರಾರಂಭಿಸಲಾಯಿತು.
3. ಆರ್.ಬಿ.ಐ ಆದೇಶ ಮತ್ತು ಬ್ಯಾಂಕಿನ ಅವಶ್ಯಕತೆಗೆ ತಕ್ಕಂತೆ ಒಂದು ಭದ್ರತಾ ಕೊಠಡಿ (ಸ್ಟ್ರಾಂಗ್ ರೂಮ್) ಯನ್ನು ಕಟ್ಟಿಸಿದೆವು.
4. ದಿನಾಂಕ: 20-08-1986 ರಿಂದ ಸದಸ್ಯರಿಗೂ ಮತ್ತು ಗ್ರಾಹಕರಿಗೆ ಚಿನ್ನಾಭರಣಗಳ ಮೇಲೆ ಸಾಲ ನೀಡಲು ಪ್ರಾರಂಭಿಸಲಾಯಿತು.
5. ದಿನಾಂಕ 19-05-1988 ರಲ್ಲಿ ಸೇಫ್ ಡಿಪಾಸಿಟ್ ಲಾಕರುಗಳನ್ನು ಒದಗಿಸಲಾಯಿತು. ಇದರ ಉಪಯೋಗವನ್ನು ಸದಸ್ಯರು ಮತ್ತು ಸಹ ಸದಸ್ಯರು ಪಡೆಯುತ್ತಿದ್ದರು.

ಇನ್ನು ಹೆಚ್ಚಿನ ಯೋಜನೆಗಳನ್ನು ಜಾರಿಗೆ ತರುವ ಉದ್ದೇಶದಿಂದ, ಸಹಕಾರ ಸಂಸ್ಥೆಯ ಬೆಳವಣಿಗೆಗಾಗಿ ನಡೆಸುತ್ತಿದ್ದ ಈ ಕೆಳಕಂಡ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದರು.
1. ತಾ: 15-11-1986 ರಂದು ಶ್ರೀ ಪಿ.ವಿ.ವೀರಣ್ಣಗೌಡರು ಮತ್ತು ಶ್ರೀ ಎ.ಮರಿಯಪ್ಪನವರು ಮೈಸೂರಿನಲ್ಲಿ,
2. ತಾ: 03-11-1988 ರಂದು ಶ್ರೀ ಎ.ಮರಿಯಪ್ಪನವರು, ಶ್ರೀ ಪಿ.ವಿ.ವೀರಣ್ಣಗೌಡರು ಮತ್ತು ಶ್ರೀ ಶಿವರಾಮುರವರು ಹುಬ್ಬಳ್ಳಿಯಲ್ಲಿ,
3. ತಾ; 16-12-1988 ರಂದು ಶ್ರೀ ಶಿವರಾಮು ಮತ್ತು ಶ್ರೀ ಬಿ.ಎಸ್.ಪ್ರಭಾಕರ್ ಅವರು ತಿರುವನಂತರಪುರದಲ್ಲಿ,
4. ತಾ: 20-01-1989 ರಲ್ಲಿ ಶ್ರೀ ಪಿ.ವಿ.ವೀರಣ್ಣಗೌಡರು ಮತ್ತು ಶ್ರೀ ಎ.ಮರಿಯಪ್ಪನವರು ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸಭೆಯಲ್ಲಿ ಭಾಗವಹಿಸಿ ಪಟ್ಟಣ ಬ್ಯಾಂಕುಗಳ ಅಭಿವೃದ್ಧಿಪಡಿಸುವ ಬಗ್ಗೆ ಅನೇಕ ವಿಷಯಗಳನ್ನು ಅರಿತು ಅವುಗಳನ್ನು ನಮ್ಮ ಬ್ಯಾಂಕಿನ ಪ್ರಗತಿಗೆ ಅಳಡಿಸಿಕೊಂಡರು.
5. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಜೊತೆ ಸಂಧಾನ ನಡೆಸಿ ರೂ.7,00,000/- ಗಳನ್ನು ಠೇವಣಿಯಾಗಿಟ್ಟು ದಿನಾಂಕ 02-09-1988 ರಿಂದ ಚೆಕ್ ತೀರುವಳಿ (ಕ್ಲಿಯರಿಂಗ್) ವ್ಯವಸ್ಥೆಯನ್ನು ಮಾಡಲಾಯಿತು, ಅಂದಿನಿಂದ ಉಳಿತಾಯ ಹಾಗೂ ಚಾಲ್ತಿ ಖಾತೆಗಳ ಸಂಖ್ಯೆಯಲ್ಲಿ ಹಾಗೂ ಮೊತ್ತದಲ್ಲಿ ಹೆಚ್ಚಳ ಕಂಡುಬಂದಿದೆ.
6. ಸದಸ್ಯರುಗಳಿಗೆ 1983 ರ ಮುಂಚೆ ರೂ.500-00 ರಿಂದ ರೂ.1,000-00 ಗಳಿಗಿಂತ ಹೆಚ್ಚಿಗೆ ಸಾಲ ಕೊಡಲು ಸಾಧ್ಯವಿರಲಿಲ್ಲ. ಆಗ ಕೊಡಲಾಗುತ್ತಿದ್ದುದು ಜಾಮೀನು ಸಾಲ ಮಾತ್ರ. ದಿನೇ ದಿನೇ ಬ್ಯಾಂಕಿನ ಆರ್ಥಿಕ ಸ್ಥಿತಿ ಉತ್ತಮವಾಗುತ್ತಿದ್ದು ಅದಕ್ಕೆ ತಕ್ಕಂತೆ ಬೈಲಾ ತಿದ್ದುಪಡಿ ಮಾಡಿ, ತನ್ನ ಬಂಡವಾಳದಿಂದ ಕಡಿಮೆ ಬಡ್ಡಿ ದರದಲ್ಲಿ ಈ ಕೆಳಕಂಡ ಮೊತ್ತದ ಮಿತಿಯಲ್ಲಿ ವಿವಿಧ ಸಾಲಗಳನ್ನು ನೀಡಲಾಯಿತು.

1. ಜಾಮೀನು ಸಾಲ - ರೂ.10,000/- ಗಳವರೆಗೆ
2. ದ್ವಿಚಕ್ರ ಹಾಗೂ ಆಟೋ ರಿಕ್ಷಾ ವಾಹನ ಸಾಲ - ರೂ.15,000/- ಗಳವರೆಗೆ
3. ಸ್ಥಿರ ಆಸ್ತಿ ಸಾಲ - ರೂ.1,00,000/- ಗಳವರೆಗೆ
4. ಚಿನ್ನಾಭರಣ ಸಾಲ – ರೂ.20,000/- ಗಳವರೆಗೆ ಒದಗಿಸಲು ಅವಕಾಶ ಮಾಡಲಾಯಿತು.


ಬ್ಯಾಂಕಿನ ಕಾರ್ಯಕ್ಷೇತ್ರ :

ಬ್ಯಾಂಕಿನ ಕಾರ್ಯಕ್ಷೇತ್ರ ಚಾಮರಾಜಪೇಟೆ, ಹನುಮಂತನಗರ, ಶಂಕರಪುರ, ಅಶೋಕನಗರ, ಎನ್.ಆರ್.ಕಾಲೋನಿ, ಗವೀಪುರಂ, ಬಸವನಗುಡಿ, ವಿಶ್ವೇಶ್ವರಪುರಂ ಇಷ್ಟಕ್ಕೆ ಮಾತ್ರ ಸೀಮಿತವಾಗಿತ್ತು. ಬ್ಯಾಂಕ್ ಮಹಾನಗರ ಪಾಲಿಕೆ ಕ್ಷೇತ್ರದಲ್ಲಿ ಇರುವುದರಿಂದ ನಮ್ಮ ಆರ್ಥಿಕ ಸ್ಥಿತಿ ಈ ಕೆಳಕಂಡ ಮಟ್ಟಕ್ಕೆ ಮುಟ್ಟಲೇಬೇಕೆಂದು ಆರ್.ಬಿ.ಐ.ನ ಸ್ಟ್ಯಾಂಡಿಂಗ್ ಆಡ್ವೈಸರಿ ಸಮಿತಿ ಆದೇಶ ಹೊರಡಿಸಿತು.
1. ಷೇರು - ರೂ.20 ಲಕ್ಷ
2. ಠೇವಣಿ - ರೂ.156 ಲಕ್ಷ
3. ಸಾಲ ಮತ್ತು ಮುಂಗಡ - ರೂ.140 ಲಕ್ಷ
4. ದುಡಿಯುವ ಬಂಡವಾಳ - ರೂ.200 ಲಕ್ಷ

ಈ ಗುರಿ ಮುಟ್ಟಲು ನಮಗೆ ನಿಗಧಿಯಾಗಿದ್ದ ಕಾರ್ಯಕ್ಷೇತ್ರ ಬಹಳ ಸೀಮಿತ ಎಂದೂ ಇಡೀ ಬೆಂಗಳೂರು ನಗರವನ್ನು ಬ್ಯಾಂಕಿನ ಕಾರ್ಯಾಚರಣೆ ವ್ಯಾಪ್ತಿಗೆ ಒಳಪಡಿಸಬೇಕೆಂದೂ ಇಲಾಖೆ ಮೇಲೆ ಮತ್ತು ಆರ್.ಬಿ.ಐ. ಅಧಿಕಾರಿಗಳ ಮೇಲೆ ಒತ್ತಡ ತರಲಾಗಿ ದಿನಾಂಕ 27-11-1987 ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ದಕ್ಷಣ ಭಾಗಕ್ಕೆ ನಮ್ಮ ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಆದೇಶ ಹೊರಡಿಸಿದರು. ಅನಂತರ ಸಹಕಾರ ಇಲಾಖೆಯವರು ಬ್ಯಾಂಕಿನ ಬೈಲಾ ತಿದ್ದುಪಡಿಗೆ ತಾ: 29-12-1989 ರಂದು ಅಂಗೀಕಾರ ನೀಡದರು.
1989-90ನೇ ಸಾಲಿನ ಆಡಿಟ್ ವರದಿಯಲ್ಲಿ ಲೆಕ್ಕಪರಿಶೋಧಕರು ಬ್ಯಾಂಕಿನ ವ್ಯವಹಾರದ ರೀತಿ, ನೀತಿ, ಲೆಕ್ಕಪತ್ರಗಳನ್ನಿಡುವ ರೀತಿ ಹಾಗೂ ಇತರ ವಿಷಯಗಳನ್ನು ಪರಿಶೀಲಿಸಿ ನಮ್ಮ ಬ್ಯಾಂಕನ್ನು ‘ಬಿ’ ದರ್ಜೆಯಿಂದ ‘ಎ’ ದರ್ಜೆಗೆ ಏರಿಸಲಾಗಿಯಿತು.
ಅಲ್ಲದೆ ಬ್ಯಾಂಕಿನ ವ್ಯವಹಾರಗಳು ಮತ್ತು ಸದಸ್ಯತ್ವ ಒಂದೇ ಸಮನೆ ಏರುತ್ತಿರುವುದರಿಂದ ನಮ್ಮ ಗ್ರಾಹಕರಿಗಾಗುತ್ತಿರುವ ಸ್ಥಳಾವಕಾಶದ ಅಭಾವವನ್ನು ಗಣನೆಗೆ ತೆಗೆದುಕೊಂಡು, ಹಾಗೂ 1991ಕ್ಕೆ ನಮ್ಮ ಬ್ಯಾಂಕ್ ಸ್ಥಾಪಿತವಾಗಿ 25 ವರ್ಷಗಳು ಕಳೆದಿರುವುದರಿಂದ ರಜತ ಮಹೋತ್ಸವದ ಜ್ಞಾಪಕಾರ್ತವಾಗಿ ಕೇಂದ್ರ ಕಛೇರಿಯ ಒಂದನೆ ಮತ್ತು ಎರಡನೇ ಮಹಡಿ ಕಟ್ಟಡವನ್ನು ನಿರ್ಮಿಸಿ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದರು.


ಬ್ಯಾಂಕಿನ ಕಾರ್ಯಕ್ಷೇತ್ರ ವಿಸ್ತಾರವಾಗಿದ್ದು, ವಿವಿಧ ಬಡಾವಣೆಗಳಿಂದ ವ್ಯವಹಾರಕ್ಕಾಗಿ ಮುಖ್ಯ ಕಛೇರಿಗೆ ಬರಲು ಸದಸ್ಯರಿಗೆ ಆಗುವ ತೊಂದರೆಯನ್ನು ಹಾಗೂ ಹೆಚ್ಚುತ್ತಿರುವ ವಹಿವಾಟನ್ನು ಗಮನದಲ್ಲಿಟ್ಟುಕೊಂಡು ಆರ್.ಬಿ.ಐ.ನಿಂದ ಅನುಮತಿ ಪಡೆದು 1995 ರಲ್ಲಿ ಜೆ.ಪಿ.ನಗರ (ಸಾರಕ್ಕಿ)ಯಲ್ಲಿ 2ನೇ ಶಾಖೆಯನ್ನು ತೆರೆಯಲಾಯಿತು.

1998 ರಲ್ಲಿ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹೊಸÀ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿತು. ನೂತನ ಆಡಳಿತ ಮಂಡಳಿಯು ಹಿರಿಯ ಹಾಗೂ ಹಿಂದಿನ ಆಡಳಿತ ಮಂಡಳಿ ಸದಸ್ಯರು ಹಾಕಿಕೊಟ್ಟ ಮಾರ್ಗದರ್ಶನವನ್ನು ಅನುಸರಿಸುತ್ತಾ ಬ್ಯಾಂಕಿನ ಷೇರು ಬಂಡವಾಳ, ಠೇವಣಿ ಸಂಗ್ರಹಣೆ, ಸಾಲ ವಿತರಣೆ, ಹೂಡಿಕೆ, ದುಡಿಯುವ ಬಂಡವಾಳ ಹಾಗೂ ವಹಿವಾಟವನ್ನು ಇನ್ನು ಹೆಚ್ಚಿನ ಮಟ್ಟಿಗೆ ವಿಸ್ತರಿಸಿದರು.

ದಿನಾಂಕ 29-06-2010 ರಲ್ಲಿ ಸುಂಕದಕಟ್ಟೆಯಲ್ಲಿ ಸ್ವಂತ ಕಟ್ಟಡದಲ್ಲಿ ಮೂರನೇ ಶಾಖೆಯನ್ನು ತೆರೆಯಲಾಯಿತು.

ದಿನಾಂಕ 08-01-2015 ರಲ್ಲಿ ಬಾಡಿಗೆ ಕಟ್ಟಡದಲ್ಲಿ ಕೆಂಗೇರಿ ಉಪನಗರದಲ್ಲಿ 4ನೇ ಶಾಖೆಯನ್ನು ಹಾಗೂ ದಿನಾಂಕ 06-09-2015 ರಂದು ಉತ್ತರಹಳ್ಳಿಯಲ್ಲಿ 5ನೇ ಶಾಖೆಯನ್ನು ತೆರೆಯಲಾಯಿತು.

ಬ್ಯಾಂಕು ಕೇಂದ್ರ ಕಛೇರಿ ಸೇರಿ ಒಟ್ಟು 5 ಶಾಖೆಗಳನ್ನು ಹೊಂದಿದ್ದು, ಇವುಗಳ ಪೈಕಿ 2 ಶಾಖೆಗಳು ಸ್ವಂತ ಕಟ್ಟಡದಲ್ಲಿ ಹಾಗೂ 3 ಶಾಖೆಗಳು ಬಾಡಿಗೆ ಕಟ್ಟಡದಲ್ಲಿ ಬ್ಯಾಂಕಿಂಗ್ ಸೇವೆ ನೀಡುತ್ತಿದೆ.

l